Thursday, 10 January 2013

ಗುಳುಂ ಹಕ್ಕಿ ಕುಂತಿತ್ತು...

ಒಂದು ಊರಲ್ಲಿ ಒಬ್ಬ ಅಜ್ಜಿ ಇದ್ಲಂತೆ. ಅವಳಿಗೊಬ್ಬ ಪೆದ್ದ ಮೊಮ್ಮಗ ಇದ್ನಂತೆ. ಅವನಿಗೆ ಏನು ಓದಿದ್ರೂ, ಹೇಳಿಕೊಟ್ರೂ ನೆನಪೇ ಉಳಿತಿರ್ಲಿಲ್ವಂತೆ. ಅಜ್ಜಿ ಅವನು ಈ ವರ್ಷ ಸರಿ ಹೋಗ್ಬಹುದು, ಮುಂದಿನವರ್ಷ ಸರಿ ಹೋಗ್ಬಹುದು ಅಂತ ಕಾಯ್ತಾ ಕಾಯ್ತಾ ಮೊಮ್ಮಗ ದೊಡ್ಡವನಾದ್ನಂತೆ. ಆದ್ರೆ ಪೆದ್ದಗುಂಡನ ಹಾಗೇ ಇದ್ನಂತೆ. ಒಂದು ದಿನ ಅಜ್ಜಿಗೆ ಸಿಟ್ಟುಬಂದು ಮೊಮ್ಮನಿಗೆ ಚೆನ್ನಾಗಿ ಬೈದು ಹೋಗು ಯಾವದಾದ್ರು ಕೆಲಸಕ್ಕೆ ಸೇರಿದ್ಮೇಲೆ ಮುಖ ತೋರ್ಸು ಅಲ್ಲಿ ತನಕ ಮನೆಗೇ ಬರ ಬಾರ್ದು ಅಂತ ಅವನ್ನ ಮನೆಯಿಂದ ಹೊರಗೆ ಹಾಕಿದ್ಲಂತೆ.



ನಮ್ಮ ಪೆದ್ದ ಮನೆ ಮನೆಗೆ ಹೋಗಿ ಕೆಲಸ ಕೊಡಿ ಕೆಲಸ ಕೊಡಿ ಅಂತ ಕೇಳಿದ.  ನಿನಗೇನೂ ಕೆಲಸ ಬರಲ್ಲ ಹೇಗೆ ಕೆಲಸ ಕೊಡೋದು? ಏನಾದ್ರೂ ಕೆಲಸ ಕಲಿತುಕೊಂಡು ಬಾ ಆಮೇಲೆ ಕೆಲಸ ಕೊಡ್ತೀವಿ ಅಂದ್ರಂತೆ. ಸರಿ ಅಂತಂದು ನಮ್ಮ ಪೆದ್ದ ಗುರೂನಾ ಹುಡುಕ್ತಾ ಹೋದ್ನಂತೆ. ಹಾಗೆ ತುಂಬಾದೂರ ಹೋದಾಗ ಅಲ್ಲಿ ಒಬ್ಬ ಗುರು ಮರದ ಕೆಳಗೆ ಕೂತಿರೋದು ಕಂಡನಂತೆ. ಅವರ ಹತ್ತಿರ ಹೋಗಿ ಗುರಗಳೇ ಗುರುಗಳೇ ನನಗೇನಾದ್ರೂ ವಿದ್ಯೆ ಹೇಳಿಕೊಡಿ, ನನಗೇನೂ ಬರಲ್ಲ ಅಂತ ಅವರ ಕಾಲು ಗಟ್ಟಿಯಾಗಿ ಹಿಡಕೊಂಡನಂತೆ. ಗುರೂಜಿ ಒಪ್ಪಿಕೊಂಡರಂತೆ.  ಹಾಗೇ ಒಂದಷ್ಟು ಸಮಯ ಆದಾಗ ನಮ್ಮ ಪೆದ್ದನಿಗೆ ಅಜ್ಜಿಯನ್ನು ನೋಡ್ಬೇಕು, ತುಂಬಾ ಸಮಯ ಆಗಿಹೋಯ್ತು, ಕೆಲಸ ಕಲಿಸಲೇ  ಇಲ್ಲ ಗುರುಗಳು. ಇವತ್ತು ಮಾತಾಡ್ತೀನಿ ಅಂತ ಯೋಚನೆ ಮಾಡಿದವನೇ ಗುರುವಿನ ಹತ್ತಿರ ಹೋಗಿ  ಅವರ ಕಾಲಿಗೆ ಬಿದ್ದು ಹೇಳಿದನಂತೆ ಗುರುಗಳೇ ಗುರುಗಳೇ ನಾನಿಲ್ಲಿದ್ದು ಬಹಳ ಸಮಯ ಆಯ್ತು. ನನಗೇನೂ ಕಲಿಸಿ ಕೊಡಲೇ ಇಲ್ಲ. ನಾನು ಅಜ್ಜಿಯನ್ನು ನೋಡಬೇಕು ಹೋಗ್ತಿದ್ದೇನೆ. ಏನಾದರೂ ಮಂತ್ರನಾದ್ರೂ ಹೇಳಿಕೊಡಿ ನಾನು ಅಜ್ಜಿಗೆ ಹೇಳಿ ತೋರಿಸೋದಕ್ಕಾದರೂ ಇರಲಿ ಅಂತ ಹೇಳಿದ.

ಅದಕ್ಕೆ ಗುರುಗಳು ಯೋಚನೆ ಮಾಡಿ  - ನಿನಗೆ ಮೂರು ಮಂತ್ರ ಹೇಳಿ ಕೊಡ್ತೇನೆ. ಮರೆಯೋದಕ್ಕಿಲ್ಲ. ಒಳ್ಳೇದಾಗತ್ತೆ ಎಲ್ಲಾ- ಅಂತಂದು  ಮೊದಲನೇ ಮಂತ್ರ ಗುಳುಂ ಹಕ್ಕಿ ಕುಂತಿತ್ತು, ಎರಡನೇದು ಬೋಳು ಮಂಡೆ ನಿಂತಿತ್ತು, ಮೂರನೇಯದು ಎಮ್ಮೆಕೋಣ ಓಡಿತ್ತೋ. ಈ ಮೂರು ಮಂತ್ರಗಳನ್ನು ಹೇಳ್ತಾನೇ ಇರಬೇಕು. ಅಂದ್ರೆ ನೀನು ಮನೆಗೆ ಹೋಗುವ ತನಕ ಅದು ನೆನಪಲ್ಲಿ  ಉಳಿಯುತ್ತದೆ ಅಂದರು. 

ನಮ್ಮ ಪೆದ್ದ ಸರಿ ಅಂತ  ಅಂದು ಮಂತ್ರ ಹೇಳ್ತಾ ಮನೆಯ ದಾರಿ ಹಿಡಿದ.  ಗುಳುಂ ಹಕ್ಕಿ ಕುಂತಿತ್ತು, ಬೋಳು ಮಂಡೆ ನಿಂತಿತ್ತು, ಎಮ್ಮೆಕೋಣ ಓಡಿತ್ತೋ. ಗುಳುಂ ಹಕ್ಕಿ ಕುಂತಿತ್ತು, ಬೋಳು ಮಂಡೆ ನಿಂತಿತ್ತು, ಎಮ್ಮೆಕೋಣ ಓಡಿತ್ತೋ. ಗುಳುಂ ಹಕ್ಕಿ ಕುಂತಿತ್ತು, ಬೋಳು ಮಂಡೆ ನಿಂತಿತ್ತು, ಎಮ್ಮೆಕೋಣ ಓಡಿತ್ತೋ.  ಹೀಗೆ ಹೇಳ್ತಾ ಬರ್ತಿರಬೇಕಾದ್ರೆ ಸಂಜೆ ಆಯ್ತು. ಇನ್ನು ಕತ್ತಲಾಗೋದ್ರೊಳಗೆ ಮಲೋಗದಕ್ಕೆ ಜಾಗ ಹುಡ್ಕೋದೊಳ್ಳೇದು  ಅಂದು ಸುತ್ತ ನೋಡಿದ. ಅದೊಂದು  ದೊಡ್ಡ ಬತ್ತದ ಗದ್ದೆಯ ಪಕ್ಕದಲ್ಲಿ ಒಂದು ಮರ ಇತ್ತು. ಹಾ ಈ ಮರದ ಕೆಳಗೆ ಮಲಗೋಣ ಅಂದುಕೊಂಡು  ಅಲ್ಲೇ ಅಡ್ಡಾದ.



ನಮ್ಮ ಪೆದ್ದ ಮಲಗಿದ ಗದ್ದೆ ಇದೆಯಲ್ಲಿ ಅಲ್ಲಿ  ದಿವಸವೂ ಬಂಗಾರದ ತೆನೆ ಬಿಡೋ ಬತ್ತದ ಸಸಿಗಳಿದ್ದವು. ಆ ಗದ್ದೆಯ ಯಜಮಾನ ಎಷ್ಟೇ ಒಳ್ಳೆಯ ಕಾವಲುಗಾರರ  ಇಟ್ರೂ ಬೆಳಿಗ್ಗೆ ಆಗೋ ಹೊತ್ತಲ್ಲಿ ಬಂಗಾರದ ತೆನೆಗಳನ್ನ ಕಳ್ಳರು ಮಾಯ ಮಾಡಿಬಿಡ್ತಿದ್ರು. ನಮ್ಮ ಪೆದ್ದ  ಆ ಗದ್ದೆ ಬದೀಲೆ ಮಲಗಿದ್ನಲ್ಲ. ಸ್ವಲ್ಪ ರಾತ್ರಿ ಆಗ್ತಿದ್ದ ಹಾಗೇ ಮೂರುಜನ ಕಳ್ಳರು ಬಂದ್ರು. ಮರದ ಕೆಳಗೆ ಮಲಗಿದ್ದ ಪೆದ್ದನ್ನ ನೋಡಿದ್ರು. ಇವನ್ಯಾರೂ ಗಟ್ಟಿ ಜನಾನೆ ಇದ್ದಾನೆ, ಸ್ವಲ್ಪ ಹೊತ್ತು ಕಾಯೋಣ ಎದ್ದು ಹೋಗ್ತಾನೋ ನೋಡೋಣ ಅಂತಂದುಕೊಂಡು ಕಾದ್ರು.  ಎಷ್ಟು ಹೊತ್ತಾದ್ರೂ ಅವನು ಎದ್ದು ಹೋಗೋ ಸೂಚನೆ ಇಲ್ಲದಾಗ ಕದಿಯೋದಕ್ಕೆ ನಿರ್ದಾರ ಮಾಡಿ ಗದ್ದೆಗೆ ಇಳಿದ್ರಂತೆ.

ನಮ್ಮ ಪೆದ್ದನಿಗೆ ಏನೋ ಶಬ್ದ ಆಯ್ತಲ್ಲಾ ಅಂತ  ಎಚ್ಚರಾಗಿ ಬಿಡ್ತು. ಎಷ್ಟು ನೆನಪು ಮಾಡ್ಕೊಂಡ್ರೂ ಗುರೂಜಿ ಹೇಳಿದ ಮಂತ್ರ ನೆನಪಾಗಲೇ ಇಲ್ಲ. ಅಯ್ಯೋ ಮಂತ್ರ ಮರತೇ ಹೋಯ್ತಲ್ಲ  ಅಂತ  ನೆನಪು ಮಾಡಿಕೊಳ್ಳೋದಕ್ಕೆ ಶುರುಮಾಡಿದ.

ಕಳ್ಳರಲ್ಲಿ ಒಬ್ಬ ಬಂಗಾರದ ತೆನೆಯ ಸಸಿಯ ಹತ್ತಿರ ಹೋಗಿ ಕೊಯ್ಯೋದಕ್ಕೆ ಅಂತ ಸಸಿಯ ಬುಡದಲ್ಲಿ ಕುಳಿತನಂತೆ. ಅದೇ ಹೊತ್ತಿಗೆ ಪೆದ್ದನಿಗೆ ಮೊದಲ ಮಂತ್ರ ನೆನಪಾಗಿ ಜೋರಾಗಿ ಗುಳುಂ ಹಕ್ಕಿ ಕುಂತಿತ್ತೋ ಅಂದನಂತೆ. ಅದನ್ನು ಕೇಳಿದ್ದೇ ತಡ ಕಳ್ಳರು ಹೆದರಿ ಮೂರೂ ಜನ ಮಾತಾಡಿಕೊಂಡು ಒಬ್ಬರು ನಿಂತು ನೋಡೋದು ಅಂತ ನಿರ್ದಾರ ಮಾಡಿ ಒಬ್ಬ ನಿದಾನಕ್ಕೆ ಎದ್ದನಂತೆ. 




ಆಗ ನಮ್ಮ ಪೆದ್ದನಿಗೆ ಎರಡನೇ ಮಂತ್ರ ಹೊಳೀತಂತೆ. ಖುಷಿಯಲ್ಲಿ ಜೋರಾಗಿ ಹೇಳಿದ್ನಂತೆ ಬೋಳುಮಂಡೆ ನಿಂತಿತ್ತು. ಅದನ್ನು ಕೇಳಿದ ಕಳ್ಳರು ಓಹ್ ಇವನಿಗೆ ನಮ್ಮಬಗ್ಗೆ ಚೆನ್ನಾಗಿ ಗೊತ್ತಿರಬೇಕು. ಇನ್ನು ಇಲ್ಲಿ ಇದ್ರೆ ನಾವು ಸಿಕ್ಕಿಹಾಕೋತೇವೆ . ಅದಕ್ಕೆ ಮೊದಲು ನಾವು ಓಡೋಣ ಅಂತ ಓಡಲು ಶುರುವಿಟ್ಟರಂತೆ. ಆಗ ನಮ್ಮ ಪೆದ್ದನಿಗೆ ಮೂರನೆಯ ಮಂತ್ರವೂ ನೆನಪಾಗಿ ಎಮ್ಮಕೋಣ ಓಡಿತ್ತೋ ಅಂತ ಜೋರಾಗಿ ಹೇಳಿ ನಿದ್ದೆ ಹೋದ್ನಂತೆ,





ಬೆಳಿಗ್ಗೆ ಗದ್ದೆಯ ಯಜಮಾನ ಬಂದು ನೋಡ್ತಾನೆ ಬಂಗಾರದ ತೆನೆ ಕಾಣುತ್ತಿರುವುದನ್ನು ನೋಡಿದವನೇ ಯಾರಪ್ಪಾ ನನ್ನ ಗದ್ದೆಯನ್ನು ಕಾದವರು ಅವರನ್ನೊಮ್ಮೆ ನೋಡಬೇಕು ತಾನು ಎನ್ನುತ್ತಾ  ಹುಡುಕಿದನು, ಆಗ ಪೆದ್ದ ನಿಧಾನಕ್ಕೆ ಏಳುವುದನ್ನು ನೋಡಿದ ಗದ್ದೆಯ ಯಜಮಾನ ಅವನಲ್ಲಿಗೆ ಬಂದು ನೀನೇ ಇನ್ನುಮೇಲೆ ಈ ಗದ್ದೆಯನ್ನು ಕಾಯಬೇಕು. ಅಂತ ಕೆಲಸ ಕೊಟ್ಟನು.
ಪೆದ್ದನು ಅಜ್ಜಿಯನ್ನೂ ಕರೆದುಕೊಂಡು ಬಂದು ಸುಖವಾಗಿದ್ದರು.